ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಸೀತಾನದಿ ಪ್ರಶಸ್ತಿ ಪುರಸ್ಕ್ರುತ ಯಕ್ಷರಂಗದ ಶ್ರೀರಾಮ - ಆರ್ಗೋಡು ಮೋಹನದಾಸ ಶೆಣೈ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಬುಧವಾರ, ಆಗಸ್ಟ್ 26 , 2015

ಖ್ಯಾತ ಪ್ರಸಂಗಕರ್ತ, ಆದರ್ಶ ಅಧ್ಯಾಪಕ, ತಾಳ ಮದ್ದಳೆ ಅರ್ಥಧಾರಿ ಸೀತಾನಧಿ ಗಣಪಯ್ಯ ಶೆಟ್ಟಿ ಪ್ರತೀಷ್ಟಾನದಿಂದ ಕೊಡಮಾಡುವ 27ನೇ ವರ್ಷದ ಸೀತಾನದಿ ಪ್ರಶಸ್ತಿಯನ್ನು ಈ ಸಾಲಿನಲ್ಲಿ ಬಡಗುತಿಟ್ಟಿನ ಹಿರಿಯ ಕಲಾವಿದ ಯಕ್ಷರಂಗದ ಶ್ರೀ ರಾಮನೆಂದೇ ಖ್ಯಾತರಾದ ಶ್ರೀ ಸಾಲಿಗ್ರಾಮ ಮೇಳದ ಪ್ರಧಾನ ಕಲಾವಿದರಾದ ಆರ್ಗೋಡು ಮೋಹನದಾಸ ಶೆಣೈಯವರಿಗೆ ನೀಡಲಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಕಳ ತಾಲೂಕು ಮುದ್ರಾಡಿಯಲ್ಲಿ ಸೀತಾನಧಿಯವರ ಸಂಸ್ಮರಣಾ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನೀಡಲಾಗುತ್ತದೆ. ಪ್ರಶಸ್ತಿಯು ಹತ್ತು ಸಾವಿರ ನಗದಿನೊಂದಿಗೆ ಪ್ರಶಸ್ತಿ ಪತ್ರವನ್ನೊಳಗೊಂಡಿದೆ

ಆರ್ಗೋಡು ಶೈಲಿಯ ಜನಕ

ಬ್ರಹ್ಮಾವರ-ಕುಂದಾಪುರ ಪ್ರಾಂತ್ಯದಲ್ಲಿ ಪರಿಚಿತವಾದ ನಡುತಿಟ್ಟಿನ ಎರಡು ಪ್ರಬೇದಗಳಾದ ಹಾರಾಡಿ, ಮಟ್ಪಾಡಿ ತಿಟ್ಟುಗಳ ಅನುಸರಣೆ ಅನುಕರಣೆ ಇಲ್ಲದೇ ತನ್ನದೇ ಶೈಲಿಯಲ್ಲಿ ಮುಂದುವರಿದು ಆರ್ಗೋಡು ಶೈಲಿಯನ್ನು ಹುಟ್ಟು ಹಾಕಿದವರು ಶೆಣೈಯವರು. ಇದೇ ರೀತಿ ಈ ಎರಡೂ ಶೈಲಿಯನ್ನು ಅನುಕರಿಸದೆ ಮೇರು ಕಲಾವಿದರಾಗಿ ಬಡಗುತಿಟ್ಟಿನಲ್ಲಿ ಮೆರೆದ ಇನ್ನೊಬ್ಬ ಕಲಾವಿದ ದಿ. ನಗರ ಜಗನ್ನಾಥ ಶೆಟ್ಟರು. ಸ್ವಥ ಬಾಗವತರಾದ ತಂದೆ ಮತ್ತು ಹತ್ತಾರು ಕಲಾವಿದರಿದ್ದ ಕುಟುಂಬದಿಂದ ಬಂದ ಶೆಣೈಯವರು ಮಾತುಗಾರಿಕೆಯಿಂದ ಬಡವಾಗಿದ್ದ ಬಡಗುತಿಟ್ಟನ್ನು ತನ್ನ ಮಾತುಗಾರಿಕೆಯಿಂದ ಎತ್ತಿ ಹಿಡಿದವರಲ್ಲಿ ಒಬ್ಬರು.

ನಗರ ಜಗನ್ನಾಥ ಶೆಟ್ಟರ ಒಡನಾಟ

ಸಮಾಜದ ಮೇಲ್ವರ್ಗದ ಜನರು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳಲು ಹಿಂಜರಿಯುತಿದ್ದ 50-60ರ ದಶಕದಲ್ಲಿ ಮಡಿವಂತ ಜಿ. ಎಸ್. ಬಿ. ಕೊಂಕಣಿ ಜನಾಂಗದಲ್ಲಿ ಜನಿಸಿದ ಮೋಹನದಾಸ ಶೆಣೈಯವರು ಈ ರಂಗದಲ್ಲಿ ಸಾದಿಸಿದ್ದು ಇತರರಿಗೆ ಅನುಸರಣೀಯ ಅನುಕರಣೀಯ ಮತ್ತು ಮಾದರಿ. ಆ ಕಾಲದಲ್ಲಿ ಮೇಲ್ವರ್ಗದಲ್ಲಿ ಕಾಣಸಿಗುವ ಬೆರಳೆಣಿಕೆಯ ಕಲಾವಿದರಲ್ಲಿ ಶೆಣೈಯವರೂ ಒಬ್ಬರು. ಅದಕ್ಕೆ ಅವರು ಬೆಳೆದ ವಾತಾವರಣ ಮತ್ತು ಕೌಟುಂಬಿಕ ಹಿನ್ನಲೆಯೇ ಸ್ಪೂರ್ತಿ.

ಮನೆ ಮಾತು ಕೊಂಕಣಿಯಾದರೂ ಕನ್ನಡ ಜ್ಞಾನ ಭಂಡಾರವಾಗಿ ಯಕ್ಷಗಾನ ಪರಂಪರೆಯ ಕೊಂಡಿಯಾಗಿ ಶಿಸ್ತು-ಗತ್ತಿನ ಸುಸಂಸ್ಕ್ರುತ ಕಲಾವಿದನಾಗಿ ಅಪಾರ ಪ್ರತ್ಯುತ್ಪನ್ನ ಮತಿತ್ವ, ಶ್ರುತಿಬದ್ದ ಸುಶ್ರಾವ್ಯ ಸ್ವರ, ಪ್ರಬಲ ಪಾಂಡಿತ್ಯ, ರಾಮಾಯಣ-ಮಹಾಬಾರತ-ಬಾಗವತಗಳ ನಿಖರ ಅನುಭವದಿಂದ ಶೆಣೈಯವರು ಇತರರಿಗೆ ಮಾದರಿಯಾಗಿ ಬೆಳೆದುಬಂದಿದ್ದಾರೆ. ಆ ಕಾಲದ ಅವರ ಸಮಕಾಲೀನರಾದ ನಗರ ಜಗನ್ನಾಥ ಶೆಟ್ಟರಲ್ಲಿ ಈ ಎಲ್ಲಾ ಅಂಶಗಳನ್ನು ಗಮನಿಸಬಹುದಾಗಿದೆ. ಅವರ ಒಡನಾಟವೂ ಶೆಣೈಯವರಿಗೆ ಬಹುಕಾಲ ಲಭಿಸಿತ್ತು.

ಬಾಲ್ಯ, ಶಿಕ್ಷಣ ಹಾಗೂ ಕಲಾಸೇವೆ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆ ಸಮೀಪ ಆರ್ಗೋಡು ಎಂಬಲ್ಲಿ ಹಿರಿಯ ಭಾಗವತ ಗೋವಿಂದರಾಯ ಶೆಣೈ ಹಾಗೂ ಮುಕ್ತಾಬಾಯಿಯವರ ಪುತ್ರನಾಗಿ ಜನಿಸಿದ ಶೆಣೈಯವರು ಹಳ್ಳಿಹೊಳೆಯ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶಂಕರನಾರಾಯಣದಲ್ಲಿ ಪ್ರೌಢ ಶಿಕ್ಷಣ ಪಡೆದರು. ಆ ಬಳಿಕ ಯಕ್ಷಗಾನ ಬಣ್ಣದ ಲೋಕವನ್ನು ಪ್ರವೇಶಿಸಿದರು. ಹಿರಿಯಡ್ಕ ಮೇಳದ ಕಲಾವಿದನಾಗಿ ಸುಧನ್ವನಾಗಿ ರಂಗವೇರಿದ ಇವರು ಮತ್ತೆ ಹಿಂದಿರುಗಿ ನೋಡಲಿಲ್ಲ.

ಅದೇ ಮೇಳದಲ್ಲಿ ಮೂರು ವರ್ಷ ದುಡಿದ ಇವರು ಆ ಮೇಳದ ಸಂಚಾಲಕನಾಗಿ ಎರಡು ವರ್ಷ ಮೇಳವನ್ನು ಮುನ್ನೆಡಿಸಿದರು. ಸಾಲಿಗ್ರಾಮ, ಪೆರ್ಡೂರು, ಕುಮಟಾ, ಮುಲ್ಕಿ, ಕಮಲಶಿಲೆ, ಮಂದಾರ್ತಿ, ಅಮೃತೇಶ್ವರಿ ಮುಂತಾದ ಮೇಳಗಳಲ್ಲಿ ಸುದೀರ್ಘ ಕಲಾಸೇವೆ ಮಾಡಿದ ಇವರು ಸದ್ಯ ಶ್ರೀ ಸಾಲಿಗ್ರಾಮ ಮೇಳದ ಪ್ರಧಾನ ಕಲಾವಿದರಾಗಿದ್ದಾರೆ.

ಆರ್ಗೋಡು ಮೋಹನದಾಸ ಶೆಣೈ
ಜನನ : 1951
ಜನನ ಸ್ಥಳ : ಆರ್ಗೋಡು, ಕಮಲಶಿಲೆ
ಕುಂದಾಪುರ ತಾಲೂಕು
ಉಡುಪಿ ಜಿಲ್ಲೆಯ
ಕರ್ನಾಟಕ ರಾಜ್ಯ
ಕಲಾಸೇವೆ:
ಸೌಮ್ಯ ಪಾತ್ರಗಳಿಗೆ ಜೀವತು೦ಬಿದ ಕಲಾವಿದ, ಹಿರಿಯಡ್ಕ, ಪೆರ್ಡೂರು, ಕುಮಟಾ, ಮುಲ್ಕಿ, ಕಮಲಶಿಲೆ, ಮಂದಾರ್ತಿ, ಅಮೃತೇಶ್ವರಿ ಮೇಳಗಳಲ್ಲಿ ಸುದೀರ್ಘ ಕಲಾಸೇವೆ. ಸದ್ಯ ಸಾಲಿಗ್ರಾಮ ಮೇಳದ ಪ್ರಧಾನ ಕಲಾವಿದರಾಗಿದ್ದಾರೆ.
ಪ್ರಶಸ್ತಿಗಳು:
  • ಸೀತಾನದಿ ಪ್ರಶಸ್ತಿ
  • ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ
  • ಶಿರಿಯಾರ ಮಂಜು ನಾಯ್ಕ ಪ್ರಶಸ್ತಿ
  • ನಿಡಂಬೂರು ಪ್ರಶಸ್ತಿ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಹಾಗೂ ಪ್ರಶಸ್ತಿಗಳು

ರಾಮನೆಂದರೆ ಶೆಣೈ, ಶೆಣೈಯವರೆಂದರೆ ರಾಮ

“ಗರಿಕೆಯಿಲ್ಲದೆ ಗಣಪತಿ ಪೂಜೆ ಇಲ್ಲ” ಎಂಬಂತೆ ಶ್ರೀ ರಾಮ ಪ್ರದಾನವಾದ ಪ್ರಸಂಗಗಳು ಶೆಣೈಯವರಿಲ್ಲದೆ ಕಳೆಗಟ್ಟದು. ``ರಾಮನೆಂದರೆ ಶೆಣೈ, ಶೆಣೈಯವರೆಂದರೆ ರಾಮ`` ಎಂಬಷ್ಟು ಪ್ರಸಿದ್ದಿ. ಅವರ ಶ್ರೀ ರಾಮನ ಪಾತ್ರ ಚಿತ್ರಣ, ಸುಂದರವಾದ ಆಳಂಗ, ಸೌಮ್ಯ ಶ್ರುತಿಬದ್ದ ಮಾತುಗಾರಿಕೆಯಿಂದ ಇವರ ರಾಮನ ಪಾತ್ರ ಚಿತ್ರಣ ಅಮೋಘ. ಕುಶಲವರ ಕಾಳಗ ಮತ್ತು ರಾಮಾಂಜನೇಯದ ರಾಮನ ಪಾತ್ರಗಳು ಯಕ್ಷಗಾನ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದವುಗಳು.

ಶ್ರೀ ಪೆರ್ಡೂರು ಮತ್ತು ಮೂಲ್ಕಿ ಮೇಳದಲ್ಲಿ ಕುಮಟಾ ಗೋವಿಂದ ನಾಯ್ಕರ ಹನುಮಂತ, ಶೆಣೈಯವರ ರಾಮ, ಎಂ. ಎ. ನಾಯ್ಕ್ ಮತ್ತು ಮುರೂರು ವಿಷ್ಣು ಭಟ್ಟರ ಸೀತೆಯ ಪಾತ್ರಗಳು ಆಯಾ ಮೇಳಗಳಲ್ಲಿ ಹೊಸ ಪ್ರೇಕ್ಷಕರನ್ನು ಹುಟ್ಟು ಹಾಕಿದವು. ಪೆರ್ಡೂರು ಮೇಳದಲ್ಲಿ ಗೋಪಾಲಾಚಾರ್ ಮತ್ತು ಕಣ್ಣಿಮನೆಯವರ ಲವಕುಶನಿಗೆ ಇವರ ರಾಮ ಕುಶಲವ ಪ್ರಸಂಗದ ಮುಖ್ಯ ಆಕರ್ಷಣೆಯಾಗಿತ್ತು. ಮೂಲ್ಕಿ ಮೇಳದ ಸೀತಾಪಾರಮ್ಯ ಪ್ರಸಂಗದ ರಾಮನ ಪಾತ್ರವೂ ಅಪಾರ ಜನಮನ್ನಣೆ ಪಡೆದಿತ್ತು.

ಸೌಮ್ಯ ಪಾತ್ರಗಳಿಗೆ ಜೀವ ತು೦ಬಿದ ಕಲಾವಿದ

ಯಾವುದೇ ಪಾತ್ರವನ್ನು ತನ್ನ ಸ್ವಂತ ಶೈಲಿಯಿಂದ ಜೀವ ತುಂಬುವ ಶೆಣೈಯವರ ಸೌಮ್ಯ ಪಾತ್ರಗ್ರಳಾದ ಶಂತನು, ಬೀಷ್ಮ, ಮಯೂರದ್ವಜ, ಉಗ್ರಸೇನ, ಕಮಲಭೂಪ, ಋತುಪರ್ಣ, ಮುಂತಾದ ಪಾತ್ರ ನಿರ್ವಹಣೆ ಅಸಾಧಾರಾಣ. ಶೆಣೈಯವರ ಕಂಠದ ಏರಿಳಿತ ಸೌಮ್ಯ ಪಾತ್ರಕ್ಕೆ ಹೇಳಿಮಾಡಿಸಿದಂತಿದ್ದು, ಪ್ರೇಕ್ಷಕರೂ ಅವರನ್ನು ಸೌಮ್ಯ ಪಾತ್ರಗಳಲ್ಲಿ ನೋಡಲು ಹೆಚ್ಚು ಆಸಕ್ತಿ ವಹಿಸುತ್ತಾರೆ. ಹಾಗಾಗಿ ಕೀಚಕ, ಕೌರವ, ಕಂಸ, ಕಾಲನೇಮಿ, ರಾವಣ ಮುಂತಾದ ಅಸುರೀ ಪ್ರವೃತ್ತಿಯ ನಾಯಕ, ಪ್ರತಿ ನಾಯಕನ ಪಾತ್ರ ನಿರ್ವಹಣೆಯಿಂದ ಅವರು ಬಹು ದೂರ ಉಳಿದಿದ್ದಾರೆ.

ಇವರ ಬಹು ಪ್ರಸಿದ್ದಿ ಪಡೆದ ಐತಿಹಾಸಕ ಪ್ರಸಂಗವಾದ ವಸಂತಸೇನೆಯ ಮೈತ್ರೇಯ ಭಟ್ಟನ ಪಾತ್ರ. ಯಕ್ಷಗಾನ ಇತಿಹಾಸದಲ್ಲಿ ಒಂದು ದಾಖಲೆ. ಶ್ರೀ ಸಾಲಿಗ್ರಾಮ ಮೇಳ ಮತ್ತು ಪೆರ್ಡೂರು ಮೇಳದಲ್ಲಿ ಶಿರಿಯಾರ ಮಂಜು ನಾಯ್ಕ್ ಮತ್ತು ನಗರ ಜಗನ್ನಾಥ ಶೆಟ್ಟರ ಚಾರುದತ್ತ , ಅರಾಟೆ ಮಂಜುನಾಥ ಮತ್ತು ರಾಮ ನಾಯರಿಯವರ ವಸಂತಸೇನೆ, ಕುಮ್ಟಾ ಗೋವಿಂದ ನಾಯ್ಕರ ಶಕಾರನ ಪಾತ್ರಗಳಿಗೆ ಶೆಣೈಯವರ ವಸಂತಸೇನೆ ಪ್ರಸಂಗದ ಮೈತ್ರೇಯನ ಪಾತ್ರ ಆಯಾ ಮೇಳಗಳಲ್ಲಿ ವಿಶೇಷ ಆಕರ್ಷಣೆಯಾಗಿತ್ತು.

ಪೌರಾಣಿಕ ಪ್ರಸಂಗವಲ್ಲದೆ ಹೊಸ ಪ್ರಸಂಗಗಳು ಡೇರೆ ಮೇಳಕ್ಕೆ ದಾಳಿ ಇಟ್ಟಾಗಲೂ ಹಿಂದೆ ಬೀಳದ ಇವರು ನಾಗಶ್ರೀ, ಚೆಲುವೆ ಚಿತ್ರಾವತಿ, ಶೂದ್ರ ತಪಸ್ವಿನಿ, ಭಾಗ್ಯ ಭಾರತಿ, ರತಿರೇಖಾ, ಬನಶಂಕರಿ ಮೊದಲಾದ ನವ್ಯ ಪ್ರಸಂಗಗಳಲ್ಲೂ ತಮ್ಮ ಕಲಾಭಿವ್ಯಕ್ತಿ ಮೆರೆಸಿದ್ದಾರೆ. ಶೆಣೈಯವರಿಗೆ ಪ್ರಸಿದ್ದಿ ನೀಡಿದ ಪಾತ್ರವೆಂದರೆ ನಾಗಶ್ರೀ ಪ್ರಸಂಗದ ಶುಭ್ರಾಂಗ. ದಿ. ನಾವಡರ ಕಲ್ಪನೆಯ ಕೂಸಾದ ನಾಗಶ್ರೀ ಪ್ರಸಂಗದ ಸೌಮ್ಯ ಪಾತ್ರವಾದ ಶುಬ್ರಾಂಗನ ಪಾತ್ರಕ್ಕೆ ಎಪ್ಪತ್ತರ ದಶಕದಲ್ಲಿ ಜೀವತುಂಬಿದ ಶಿರಿಯಾರ ಮಂಜುನಾಯ್ಕರ ನಾಯ್ಕರ ನಂತರ ಆ ಪಾತ್ರಕ್ಕೆ ಮರುಹುಟ್ಟು ನೀಡಿದವರು ವಾಸುದೇವ ಸಾಮಗರು ಮತ್ತು ಶೆಣೈಯವರು.

ಬಡಗುತಿಟ್ಟಿನ ಅಘೋಷಿತ ಗುರುಗಳು

ರಂಗದಲ್ಲಿ ಎಷ್ಟು ಪರಿಪೂರ್ಣವಾಗಿ ತನ್ನ ಪಾತ್ರವನ್ನು ಚಿತ್ರಿಸಬಲ್ಲರೋ ಅಷ್ಟೇ ವಿದ್ವತ್ತನ್ನೂ ಚೌಕಿಯಲ್ಲೂ ಹಂಚಿಕೊಳ್ಳುವ ಶೆಣೈಯವರು ಬಡಗುತಿಟ್ಟಿನ ಚೌಕಿಯ ದೊಡ್ಡ ಆಸ್ತಿ. ಕಿರಿಯ ಕಲಾವಿದರಿಗೆ ತನ್ನ ಅನುಭವವನ್ನು ದಾರೆ ಎರೆಯುವ ಇವರು ತನ್ನ ಜ್ಞಾನವನ್ನು ತೆರೆದ ಪುಸ್ತಕದಂತೆ ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ದಾರಾಳ ಬುದ್ದಿಯವರು. ಹಿರಿ-ಕಿರಿಯರೆನ್ನದೇ ಮೇಳದ ಸರ್ವ ಕಲಾವಿದರಿಗೂ ಇವರು ಅಘೋಷಿತ ಗುರುಗಳು. ಸರ್ವ ಕಲಾವಿದರಿಂದ ಗುರುಗಳೆಂದು ಕರೆಸಿಕೊಳ್ಳುವ ಇವರು ಕಿರಿಯ ಕಲಾವಿದರನ್ನು ತಿದ್ದಿ ತೀಡಿ ಜೊತೆಗೆ ಬೆಳೆಯಗೊಡುವ, ಮತ್ತು ತಿರುಗಾಟಕ್ಕೆ ದಾರಿದೀಪವಾಗಿ ನಿಲ್ಲಬಲ್ಲ ಸರಳ ಸಜ್ಜನ ಸಹೃದಯೀ ಕಲಾವಿದರು.

ಯಕ್ಷಗಾನ ಕಲೆಗಾಗಿ ಜೀವನವನ್ನು ಅರ್ಪಿಸಿ ತಾಳಮದ್ದಳೆ ಕ್ಷೇತ್ರವನ್ನೂ ಜೊತೆ ಜೊತೆಗೆ ಶ್ರೀಮಂತಗೊಳಿಸಿ, ಕಲಾ ಸಾರ್ಥಕ್ಯ ಕಂಡ ಹಿರಿಯ ಕಲಾವಿದ ಶೆಣೈಯವರಿಗೆ ಪ್ರತಿಷ್ಟಿತ ಸೀತಾನಧಿ ಪ್ರಶಸ್ತಿ ಯೋಗ್ಯವಾಗಿಯೇ ಅರಸಿಬಂದಿದೆ.

****************

ಆರ್ಗೋಡು ಮೋಹನದಾಸ ಶೆಣೈಯವರ ಕೆಲವು ವಿಡಿಯೊಗಳು










****************



ಆರ್ಗೋಡು ಮೋಹನದಾಸ ಶೆಣೈಯವರ ಕೆಲವು ಚಿತ್ರಗಳು ( ಕೃಪೆ : ರಾಮ್ ನರೇಶ್ ಮ೦ಚಿ ಮತ್ತು ಅ೦ತರ್ಜಾಲದ ಅನಾಮಿಕ ಮಿತ್ರರು )



ಪ್ರಶಸ್ತಿ ಸಮಾರ೦ಭವೊದರಲ್ಲಿ





Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
sandeep Pai s(9/1/2015)
uttama kalavidarivaru
Raghavendra P N Jois (8/26/2015)
ಇದನ್ನು ಕೇಳಿ ಹರ್ಷವಾಂತೆನು.ಉತ್ತಮ ವಾಗ್ಮಿಯಿವರು.
Nmahesh Upadhyaya(8/26/2015)
Avarige devaru innu uttamavada kala seve maduva shakti kodali yendu nanna prarthane




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ